ಕ್ಯಾದರ್, ವಿಲ ಸೈಬರ್ಟ್	
1876-1947. ಅಮೆರಿಕದ ಕಾದಂಬರಿಗಾರ್ತಿ ಮತ್ತು ಕಥೆಗಾರ್ತಿ. ಹುಟ್ಟಿದ್ದು ವರ್ಜಿನಿಯದ ವಿಂಚೆಸ್ಟರ್‍ನಲ್ಲಿ. ಎಂಟು ವಯಸ್ಸಿನವಳಿದ್ದಾಗ ಇಡೀ ಕುಟುಂಬವೇ ನಬ್ರಸ್ಕದ ಬಳಿ ಪಶುಪಾಲನಾ ಕ್ಷೇತ್ರವೊಂದಕ್ಕೆ ಸಾಗಬೇಕಾಯಿತು. ಆದರೆ ಈಕೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ ಪಶ್ಚಿಮದವಳಾಗಿಯೇ ಉಳಿದಳು, ಪತ್ರಿಕೆಯ ಸುದ್ದಿಗಾರಳಾಗಿದ್ದುಕೊಂಡೇ ನಬ್ರಸ್ಕ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದಳು. ಅನಂತರ ಪಿಟ್ಸ್‍ಬರ್ಗ್‍ನ ಡೆಯ್ಲಿ ಲೀಡರ್ ಪತ್ರಿಕೆಯ ನಾಟಕ ವಿಮರ್ಶಕಳಾಗಿ ಕೆಲಸ ಮಾಡಿದಳು. 1903ರಲ್ಲಿ ಏಪ್ರಿಲ್ ಟ್ವಿಲೈಟ್ ಎಂಬ ಕವನ ಸಂಕಲನವೊಂದನ್ನೂ 1905ರಲ್ಲಿ ದಿ ಟ್ರಾಲ್ ಗಾರ್ಡನ್ ಎಂಬ ಕಥಾಸಂಕಲವನ್ನೂ ಪ್ರಕಟಿಸಿದಳು. 1906 ರಿಂದ 1912ರ ವರೆಗೆ ಮ್ಯಾಕ್ಲರ್ಸ್ ಮ್ಯಾಗಜಿûೀನಿನ ಆಡಳಿತ ನಿರ್ವಾಹಕ ಸಂಪಾದಕಳಾಗಿ ಕೆಲಸ ಮಾಡಿದಳು. ಓ ಪಯೊನೀರ್ಸ್ (1913) ಎಂಬ ಈಕೆಯ ಕಾದಂಬರಿ ಪಶ್ಚಿಮದಿಂದ ವಲಸೆ ಬಂದವರ ಚಿತ್ರಣವಾಗಿದೆ. ಈ ಕಾದಂಬರಿ ಈಕೆಗೆ ಹೆಚ್ಚಿನ ಖ್ಯಾತಿ ತಂದಿತು. ಅನಂತರ ಮೈ ಅಂಟೋನಿಯ (1918) ಮತ್ತು ಎ ಲಾಸ್ಟ್ ಲೇಡಿ (1923) ಕಾದಂಬರಿಗಳು ಬಂದವು. ಆಮೇಲೆ ಬಂದ ಕಾದಂಬರಿಗಳಲ್ಲಿ ಈಕೆಯ ಮೇಲೆ ಆದ ರೋಮನ್ ಕ್ಯಾಥೊಲಿಕ್ ಧರ್ಮದ ಪ್ರಭಾವವನ್ನು ಗುರುತಿಸಬಹುದು. 1933ರಲ್ಲಿ ಪ್ರಿಕ್ಸ್ ಫೆಮಿನ ಅಮೆರಿಕೈನೆ ಪ್ರಶಸ್ತಿಯನ್ನು ಗಳಿಸಿದಳು. ಐದು ವಿಶ್ವವಿದ್ಯಾನಿಲಯಗಳು ಈಕೆಗೆ ಗೌರವ ಪದವಿಯನ್ನು ನೀಡಿದವು. ಈಕೆಯ ಕೃತಿಗಳಲ್ಲಿ ಶಿಷ್ಟಸಾಹಿತ್ಯದ ಮೇಲಿನ ಹಿಡಿತ ಮತ್ತು ಸಮತೋಲವನ್ನು ಗುರುತಿಸಬಹುದು. ಈಕೆಯ ಕೃತಿಗಳಲ್ಲಿ ಪ್ರಾಚೀನತಾ ಪ್ರೇಮ. ಅರ್ಥಗರ್ಭಿತ ಸಂಕೇತಗಳಿದ್ದರೂ ವಾಸ್ತವತೆಯ ಕೊರತೆ ಕಾಣದೆ ಇರದು.

ಪ್ರೊಫೆಸರ್ಸ್ ಹೌಸ್ (1925), ಡೆತ್ ಕಮ್ಸ್ ಫಾರ್ ದಿ ಆರ್ಚ್‍ಬಿಷಪ್ (1927), ಪ್ಯಾಡೋಸ್ ಆನ್ ದಿ ರಾಕ್ (1931), ಸಫೀರಾ ಅಂಡ್ ದಿ ಸ್ಲೇವ್ ಗರ್ಲ್ (1940), ಯೂತ್ ಅಂಡ್ ದಿ ಬ್ರೈಟ್ ಮೆಡ್ಯೂಸ (1920), ಅಬ್ಸ್‍ಕ್ಯೂರ್ ಡೆಸ್ಟಿನೀಸ್ (1932)- ಇವು ಈಕೆಯ ಇತರ ಕೆಲವು ಕಾದಂಬರಿಗಳು.

ಒನ್ ಆಫ್ ಅವರ್ಸ್ ಎಂಬ ಕಾದಂಬರಿ ಪುಲಿಟ್‍ಜûರ್ಕ್ ಬಹುಮಾನ ಗಳಿಸಿತು. ದಿ ಓಲ್ಡ್ ಬ್ಯೂಟಿ ಅಂಡ್ ಅದರ್ಸ್ (1948) ಎಂಬ ಸಂಕಲನದಲ್ಲಿ ಈಕೆಯ ವಿಶಿಷ್ಟ ಕಥೆಗಳಿವೆ. ನಾಟ್ ಅಂಡರ್ ಫಾರ್ಟಿ (1936) ಎಂಬ ಕೃತಿಯಲ್ಲಿ ಸಾಹಿತ್ಯ ಮತ್ತು ವ್ಯಕ್ತಿಗಳಿಗೆ ಸಂಬಂಧಿಸಿದಂಥ ಪ್ರಬಂಧಗಳಿವೆ. 1937-41ರ ಅವಧಿಯಲ್ಲಿ ಈಕೆಯ ಸಾಹಿತ್ಯಸೃಷ್ಟಿಯನ್ನೆಲ್ಲ 13 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. 
		(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ